ನಿನ್ನ ತಪ್ಪಿಗೆ ನೀನೆ ಹೊಣೆ

ಮುತ್ತಾನಲ್ಲೂರು ಬಿಟ್ಟರೂ, ಅಮ್ಮ ಅಲ್ಲಿನ ಸಂಬಂಧಗಳನ್ನು ಬಿಡಲಿಲ್ಲ. ಆಗಾಗ ಹೋಗುವುದು ಇದ್ದೇ ಇತ್ತು. ಅಮ್ಮ ಆ ಊರಿಗೆ ಬಂದಾಗ ಇಪ್ಪತ್ತೆರಡೋ ಇಪ್ಪತ್ಮೂರೋ ವಯಸ್ಸು. ಅಮ್ಮನಿಗೆ ಸ್ವಂತಿಕೆ, ಸಂಬಳ, ಗೌರವ, ಸ್ನೇಹಿತರು, ಪ್ರೀತಿ, ಮುಂದೆ ಕುಟುಂಬ ಕೊಟ್ಟ ಊರದು. ಅದು ಅಮ್ಮನಿಗೆ ಮರು ಹುಟ್ಟು ಕೊಟ್ಟ ಊರು ಅಂತಲೆ ಅವಳ ಭಾವನೆ.

ಈಗ ೨೦೧೭ರ ಬೆಂಗಳೂರಿನಲ್ಲಿ ಒಂಟಿ ಹೆಣ್ಣು ಮಕ್ಕಳಿಗೆ ಮನೆ ಬಾಡಿಗೆ ಕೊಡಲು ಯೋಚನೆ ಮಾಡುವ ಮನಸ್ಥಿತಿ ಇರುವಾಗ, ಆಗ ಚಿಕ್ಕರಾಮರೆಡ್ಡಿ ಹಾಗು ಚೆನ್ನಕ್ಕ ಧಾರಾಳ ಮನಸ್ಸಿನಿಂದ ಅಮ್ಮನಿಗೆ ಒಂದು ರೂಮನ್ನು ಬಾಡಿಗೆ ಕೊಟ್ಟಿದ್ದರು. ೧೯೭೭ನೇ ಇಸವಿಯಲ್ಲಿ, ಒಂದು ಹಳ್ಳಿಯಲ್ಲಿ ಇದು ಸಾಧ್ಯವಾಯಿತು ಅಂದರೆ ಇಂದು ನಂಬುವುದು ಕಷ್ಟ (ಬಹುಶಃ ಸಮಾಜ ಹಿಮ್ಮುಖವಾಗಿ ಚಲಿಸುತ್ತಿದೆ ಅನ್ನಿಸುತ್ತದೆ ಒಮ್ಮೊಮ್ಮೆ). ಅದಕಾರಣ ಅಮ್ಮನಿಗೆ ಆ ದಂಪತಿಗಳ ಮೇಲೆ ವಿಶೇಷ ಪ್ರೀತಿ ಹಾಗು ಗೌರವ.
ಅಮ್ಮ ಆಗಾಗ ಚೆನ್ನಕ್ಕನ ಬಳಿ ಕಾಸು ಕೂಡಿಟ್ಟು ವರ್ಷಕ್ಕೊಮ್ಮೆ ಚಿಕ್ಕ ಪುಟ್ಟ ಚಿನ್ನದ ಆಭರಣಗಳನ್ನು ಕೊಳ್ಳುವ ಸಂಪ್ರದಾಯ ಇಟ್ಟುಕೊಂಡಿದ್ದಳು. ಇದು ಊರು ಬಿಟ್ಟ ಮೇಲು ಸಾಧಾರಣವಾಗಿ ಮುಂದುವರಿಯಿತು. ನಂತರದ ದಿನಗಳಲ್ಲಿ ಅವರು ಲಕ್ಕಸಂದ್ರ ಸೇರಿಕೊಂಡರು. ಆಗ ಭೇಟಿ ಕಡಿಮೆಯಾದರು ನಿಲ್ಲಲಿಲ್ಲ.

ನಾನಾಗ ೪ನೆಯ ಕ್ಲಾಸ್‌ನಲ್ಲಿದ್ದೆ. ಒಂದು ಭಾನುವಾರ ಚೆನ್ನಕ್ಕನ ಮನೆಗೆ ಹೋಗುವ ತೀರ್ಮಾನ ಆಯಿತು. ಬೆಳಗ್ಗೆ ಉಪಹಾರ ಮುಗಿಸಿ ನಾನು, ಅಮ್ಮ, ಮಮತ ಕೆ.ಆರ್ ಮಾರ್ಕೆಟ್ ಬಸ್ಸು ಹಿಡಿದು ಲಕ್ಕಸಂದ್ರಕ್ಕೆ ಹೊರಟ್ವಿ. ಸುಮ್ಮನೆ ಮಾತಾಡಿಸಿಕೊಂಡು ಬರೋಣ ಎಂದು ಹೋಗಿದ್ದರಿಂದ, ಊಟದ ಹೊತ್ತಿಗೆ ಮನೆಗೆ ವಾಪಸ್ಸ್.

ಅಪರಾಹ್ನ ನಾನೊಂದು ವಾಚ್‌ ಕಟ್ಟಿಕೊಂಡು ಆಡುತ್ತಿದ್ದೆ. ಅಮ್ಮ ಗಮನಿಸಿದ್ದಾಳೆ ಆದರೆ ಏನೂ ಹೇಳಲಿಲ್ಲ. ೩ ಗಂಟೆ ಹೊತ್ತಿಗೆ ನನ್ನನ್ನು ಕರೆದು ವಿಚಾರಣೆ ಪ್ರಾರಂಭಿಸಿದಳು. ನಾನು ಬಿಟ್ಟುಕೊಡಲಿಲ್ಲ. ಬಸ್ಸಿನಲ್ಲಿ ಅದು ಹೇಗೆ ಸಿಕ್ಕಿತೆಂದು ದೀರ್ಘವಾಗಿ ಕಥೆ ಕಟ್ಟಿ ಹೇಳಿದೆ. ಅವಳು ನನ್ನಮ್ಮ. ನನ್ನ ಮುಖ ಓದಲು ಅವಳಿಗೆ ಎರಡು ನಿಮಿಷ ಸಾಕಾಯ್ತು. ನನ್ನನ್ನು ದೂರ ಇರಲು ಹೇಳಿ ಸಣ್ಣದಾಗಿ ಅಳಲು ಪ್ರಾರಂಭಿಸಿದಳು. ನನಗೆ ಇನ್ನೊಂದು ಸೆಕೆಂಡ್ ತಡೆಯಲಿಕ್ಕೆ ಆಗಲಿಲ್ಲ. ಸತ್ಯ ಹೇಳಿಬಿಟ್ಟೆ.

ವಾಚ್ ಅಂದರೆ ನನಗೆ ಮೊದಲಿಂದಲೂ ಎಲ್ಲಿಲ್ಲದ ಪ್ರೀತಿ. ೧೦ ವರ್ಷದ ಬಾಲಕನಿಗೆ ವಾಚ್ ಅಗತ್ಯ ಇರಲಿಲ್ಲ, ಆದುದರಿಂದಲೇ ಅವರು ನನಗೆ ತೆಗೆಸಿಕೊಟ್ಟಿರಲಿಲ್ಲ. ಅದರೆ ಬಾಲಕನ ಆಸೆಗೆ ಯಾವ ಪರೀದಿ? ಸಮಯ ನೋಡಿ ಎತ್ತಿಕೊಂಡುಬಿಟ್ಟಿದ್ದೆ ಯಾವ ಬುದ್ದಿಯನ್ನೂ ಉಪಯೋಗಿಸದೆ. ಅದರೆ ಈಗ ಅಮ್ಮನ ಅಳು ನನನ್ನು ಯೋಚನೆಗೆ ಹಚ್ತಿತ್ತು. ದುಃಖ ಉಮ್ಮಳಿಸಿಕೊಂಡು ಬಂದಿತ್ತು.

ಅಮ್ಮ ಬೈತಾಳೆ, ಒಂದೆರಡು ಏಟು ಹಾಕ್ತಾಳೆ, ಅಮೇಲೆ ಎಲ್ಲಾ ಸರಿಹೋಗುತ್ತೆ ಅಂತ ಅಂದುಕೊಂಡಿದ್ದ ನನಗೆ ಇನ್ನೊಂದು ಶಾಕ್ ಬಾಕಿ ಇತ್ತು.

ಅಲ್ಲಿಯವರೆಗೆ ಅಳುತ್ತಿದ್ದ ಅಮ್ಮ ಸರಸರನೆ ಮುಖ ತೊಳೆದುಕೊಂಡು, ಸೀರೆ ಬದಲಾಯಿಸಿಕೊಂಡು ಎರಡೇ ನಿಮಿಷದಲ್ಲಿ ತಯಾರಾದಳು. ಆ ಕಡೆ ಟೆಲಿಫ಼ೋನಿನಲ್ಲಿ, ಚಿಕ್ಕ ಹುಡುಗ, ಪರವಾಗಿಲ್ಲ ಬಿಡಿ ಅನ್ನುವುದಕ್ಕೂ ಅಮ್ಮ ಇಲ್ಲ. “ನಾವು ಈಗ ಕ್ಷಮೆ ಕೇಳಲು ಹೊರಟಿದ್ದೇವೆ” ಅಂತ ಹೇಳಿ ಮನೆ ಬೀಗ ಹಾಕುವುದಕ್ಕೆ ಎರಡು ಸೆಕೆಂಡ್ ಮಾತ್ರ ಬೇಕಾಯ್ತು. ನನಗೆ ಇನ್ನೂ ಸರಿಯಾಗಿ ಅರ್ಥವಾಗುವ ಮೊದಲೇ ನಾವು ಕಾಂಪೌಂಡ್ ದಾಟಿ ರಸ್ತೆಯಲ್ಲಿದ್ದೆವು.

ಅಮ್ಮನ ಕೈಕಾಲು ಹಿಡಿದು ಕ್ಷಮೆಯಾಚಿಸುವುದು ಒಂಥರ, ಬೇರೆಯವರ ಮುಂದೆ ಕೈಮುಗಿದು ಕ್ಷಮೆಯಾಚಿಸುವುದು ಬೇರೆ. ನನಗೆ ವಯಸ್ಸು ಹತ್ತಾಗಿದ್ದರು ಅಹಂ ಮುವತ್ತರದ್ದು. ಪರಿಪರಿಯಾಗಿ ಕೇಳಿಕೊಂಡೆ, ಫೋನಲ್ಲಿ ಕೇಳ್ತೀನಿ, ಮುಂದಿನ ಬಾರಿ ಕೇಳ್ತೀನಿ ಅಂತೆಲ್ಲ. ಈಗ ಯೋಚನೆ ಮಾಡಿದರೆ ಅಹಂಗಿಂತ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಇರಲ್ಲಿಲ್ಲ ಅನ್ನಿಸುತ್ತದೆ. ಅಮ್ಮ ಒಪ್ಪಲಿಲ್ಲ. ಸರಿ ಅವರ ಮನೆಗೆ ಹೋದೆವು. ಕೈಮುಗಿದು ಕ್ಷಮೆಯಾಚಿಸಿದ್ವಿ. ಚೆನ್ನಕ್ಕ ತುಂಬಾ ಪ್ರೀತಿಯಿಂದ ತಲೆ ಸವರಿ ಹೇಳಿದ ಮಾತು ಇಂದೂ ನೆನಪಿದೆ. “ಅಮ್ಮನ ಮನ ನೋಯಿಸಬೇಡ. ನಿಮಿಬ್ಬರ ಮೇಲೆ ಪ್ರಾಣಾನೆ ಇಟ್ಟುಕೊಂಡಿದ್ದಾಳೆ”.

ಮನೆಗೆ ಬರುವವರೆಗೂ ಮಾತಿಲ್ಲ. ನಾನಿನ್ನೂ ಅಳುತ್ತಿದ್ದೆ. ರಾತ್ರಿ ಅಮ್ಮ ಸಮಾಧಾನ ಮಾಡುತ್ತಾ ಒಂದು ಮಾತು ಹೇಳಿದಳು “ನಿನ್ನ ತಪ್ಪಿಗೆ ನೀನೇ ಹೊಣೆ, ಹೆಜ್ಜೆ ಇಡುವ ಮುನ್ನ ಯೋಚನೆ ಮಾಡು, ಹಾಗು ಅಕಸ್ಮಾತ್ ತಪ್ಪು ಮಾಡಿದಾಗ ಕ್ಷಮೆ ಕೇಳುವುದಕ್ಕೆ ಹಿಂಜರಿಯಬೇಡ. ನಿನ್ನ ತಪ್ಪನ್ನು ನೀನೆ ಸರಿ ಮಾಡಬೇಕು” ಅಂತ. ಆಗ ನನಗೆ ಅಷ್ಟು ತಿಳಿಯದಿದ್ದರು, ಈಗ ಅದು ನನ್ನ ಪಾಲಿನ ವಚನಗಳು.