ನನಗಿಬ್ಬರೂ ಒಂದೇ

ನನಗೆ ಸುಮಾರು ೧೦ ವರ್ಷವಾದಾಗ ಅಮ್ಮ ನನ್ನನ್ನು ಮನೆ ಕೆಲಸಕ್ಕೆ ಹಚ್ಚಿದಳು. ಬೇರೆಯವರ ಮನೆ ಅಲ್ಲ ನಮ್ಮನೆ ಕೆಲಸ.

ಅಲ್ಲಿಯವರೆಗು ಅಮ್ಮ ತನ್ನ ಕೆಲಸದ ಜೊತೆ ಮನೆ ಕೆಲಸ ಮಾಡುತ್ತಿದ್ದರು. ಅಪ್ಪ ಕೆಲಸದ ಜೊತೆ ಮನೆಗೆ ಸಂಬಂಧಿಸಿದ ಹೊರಗಿನ ಕೆಲಸ ಮಾಡುತಿದ್ದರು. ನಮಗೆ ೧೦ ವರ್ಷವಾದ ತಕ್ಷಣ ಅವರ ಕೆಲಸಗಳನ್ನು ನಮ್ಮೊಡನೆ ಹಂಚಿಕೊಳ್ಳಲು ಪ್ರಾರಂಭಿಸಿದರು. ಸ್ವಲ್ಪ ವ್ಯತ್ಯಾಸ ಅಂದರೆ ಅಮ್ಮ ನಮಗೆ ಹೊರಗಿನ ಕೆಲಸ, ಮನೆಯೊಳಗಿನ ಕೆಲಸ ಅಂತ ಭೇದ ಭಾವ ಮಾಡಲಿಲ್ಲ. ಪಾತ್ರೆ ಒರೆಸುವುದು, ಕಸ ಗುಡಿಸುವುದು, ದಿನಸಿ ತರುವುದು, ತರಕಾರಿ ತೊಳೆಯುವುದು, ತರಕಾರಿ ಹೆಚ್ಚುವುದು ಮುಂತಾದುವನ್ನು ಪ್ರತಿ ದಿನ ಮಮತ ಮಾಡುತಿದ್ದೆವು. ನನ್ನ ಮತ್ತು ಅವಳ ಕೆಲಸಗಳಲ್ಲಿ ಯಾವ ವ್ಯತ್ಯಾಸವು ಇರಲಿಲ್ಲ. ಇವತ್ತು ನಮಗೆ ಹೆಣ್ಣು ಹಾಗು ಗಂಡಿನ ನಡುವಿನ ಸಮಾನತೆಯ ಕಿಂಚಿತ್ತಾದರೂ ಅರಿವಿದೆ ಅಂದರೆ ಅದಕ್ಕೆ ಇದು ಮುಖ್ಯ ಕಾರಣ.

ಇನ್ನೂ ಭಾನುವಾರ ಬಂತೆಂದರೆ ಅಪ್ಪನ ಲೂನ ತೊಳೆದು, ಒರೆಸಿ, ಪಾಲಿಶ್ ಹಾಕುವ ಕೆಲಸ. ಅಪ್ಪ ಪರ್ಫೆಕ್ಷನಿಸ್ಟ್. ಗಾಡಿ ಥಳ ಥಳ ಅಂತ ಹೊಳೆದರೆ ಮಾತ್ರ ನಮ್ಮಿಬ್ಬರಿಗೂ ಸೇರಿ ೨ ರುಪಾಯಿ ಕೊಡುತ್ತಿದ್ದರು. ನಂತರ ಅಪ್ಪನ ಜೊತೆಗೂಡಿ ಮನೆ ಸುತ್ತ ಮುತ್ತ ಸ್ವಚ್ಛಗೊಳಿಸಿ, ಮನೆ ಬಾಗಿಲು, ಕಿಟಕಿ ಎಲ್ಲಾ ಅವರಿಗೆ ಒಪ್ಪಿಗೆಯಾಗುವ ಹಾಗೆ ಸ್ವಚ್ಛಗೊಳಿಸಿದರೆ ಮತ್ತೆ ೨ ರೂಪಾಯಿ. ಒಟ್ಟು ೪ ರುಪಾಯಿಗೆ ನಾವಿಬ್ಬರು ಸುಮಾರು ನಾಲ್ಕು ತಾಸು ಕೆಲಸ ಮಾಡತ್ತಿದ್ದೆವು. ಹೀಗಾಗಿ ಹಣದ ಮೌಲ್ಯ ನಮಗಾಗಲೆ ಅರಿವಿಗೆ ಬಂದಿತ್ತು.

ಎಷ್ಟೋ ಬಾರಿ ನೆರೆ ಹೊರೆಯವರು ಅಮ್ಮನನ್ನು ಇದರ ಬಗ್ಗೆ ಪ್ರಶ್ನೆ ಮಾಡಿದ್ದುಂಟು. ಪ್ರಶ್ನೆ ಯಾವಾಗಲು "ಯಾಕೆ ಮಕ್ಕಳ ಕೈಲಿ ಮನೆ ಕೆಲಸ ಮಾಡಿಸುತ್ತೀರ, ಅದು ಗಂಡು‌ ಹುಡುಗನ ಕೈಲಿ ಅಡುಗೆ ಮನೆ ಕೆಲಸ?". ಪ್ರತಿ ಬಾರಿಯು ಅಮ್ಮನ ಸರಳ ಉತ್ತರ "ಈ ಮನೆ ನಮ್ಮ ನಾಲ್ವರದು, ಅದಕ್ಕೆ ಎಲ್ಲರೂ ಸಾಧ್ಯವಾದಷ್ಟು ಕೆಲಸ ಮಾಡಬೇಕು" ಹಾಗು "ನನಗೆ ಗಂಡು, ಹೆಣ್ಣು ಒಂದೇ, ಎಲ್ಲರೂ ಎಲ್ಲಾ ಕೆಲಸ ಮಾಡಬೇಕು". ಆಗ ನನಗೆ ಅದು ಅರ್ಥವಾಗದಿದ್ದರು. ಈಗ ಅದು ಮಕ್ಕಳನ್ನು ಬೆಳೆಸುವ ಅತ್ತ್ಯುತ್ತಮ ವಿಧಾನ ಎಂದು ನಂಬಿದ್ದೇನೆ.

ನಮ್ಮಲ್ಲಿ ಅದು ಮನೆಯಲ್ಲಿನ ಕೆಲಸದ ಬಗ್ಗೆ ಗೌರವ, ಸಮಾನತೆ, ಮನೆಯ ಬಗ್ಗೆ ಜವಾಬ್ದಾರಿ ಮುಂತಾದವನ್ನು ಕಲಿಸಿತು. ಅದಕ್ಕೆ ಅಮ್ಮನಿಗೆ ಋಣಿ.

ಮನೆಯ ಒಳಗಿನ ಹಾಗು ಹೊರಗಿನ ಕೆಲಸಗಳನ್ನು ಹೆಣ್ಣು ‌ಹಾಗು ಗಂಡು ಮಕ್ಕಳು ಒಟ್ಟಾಗಿ ಮಾಡುವುದರಿಂದಲೆ ಲಿಂಗ ತಾರತಮ್ಯ ಕಡಿಮೆ ಮಾಡಲು ಸಾಧ್ಯ ಎಂದು ನಾನು ನಂಬಲು ಇದೆ ಮುಖ್ಯ ಕಾರಣ. ಈಗಿನ ಕಾಲದ ಚಿಕ್ಕ ಮಕ್ಕಳ ತಂದೆ, ತಾಯಂದಿರು ಇದರ‌ ಬಗ್ಗೆ ಯೋಚನೆ ಮಾಡಬೇಕು.

ನನ್ನ ಪ್ರಕಾರ ‌ಇದು ಬಾಲ್ಯದಲ್ಲಿ ಸಿಗಬೇಕಾದ ಅತಿ ಮುಖ್ಯವಾದ ಶಿಕ್ಷಣ, ವಿಶೇಷವಾಗಿ ಭಾರತೀಯ ಗಂಡು ಮಕ್ಕಳಿಗೆ. ಯಾಕೆ ಅನ್ನವುದು ನಿಮಗೆ ತಿಳಿದೆ ಇದೆ.

ಇಲ್ಲಿ ಹೇಳಬೇಕಾದ ಇನ್ನೊಂದು ಅಂಶ‌ ಅಂದರೆ ಅಪ್ಪ ಮನೆ ಒಳಗಿನ ಕೆಲಸ ಮಾಡದಿದ್ದರೂ ನನ್ನನು ಯಾವತ್ತೂ ತಡೆಯಲ್ಲಿಲ್ಲ ಅಥವಾ ಅಮ್ಮನ ವಿಧಾನವನ್ನು ಪ್ರಶ್ನಿಸಲಿಲ್ಲ.