ಅನ್ಯಮತೀಯ
ನಿತ್ಯಾನಂದ ಬಿ ಶೆಟ್ಟಿಯವರ ‘ಅಳವು ಅರಿಯದ ಭಾಷೆ’ ಪುಸ್ತಕಕ್ಕೆ ಇಸ್ಮಾಯಿಲ್ ಅವರು “ಕೇಡಿನ ಭಾಷೆಯೇ ಆಡುಭಾಷೆಯಾದಾಗ…” ಲೇಖನದ ಮೂಲಕ ಪ್ರತಿಕ್ರಿಯಿಸಿದ್ಡಾರೆ. ಸಮಯ ಸಿಕ್ಕಾಗ ಓದಿ. ಆ ಲೇಖನದ ಈ ಎರಡು ಪ್ಯಾರಾಗಳು ನನ್ನ ಮನದಲ್ಲಿ ಉಳಿದಿವೆ.
ಆ ದಿನಗಳಲ್ಲಿ ಕರಾವಳಿಯಿಂದ ಪ್ರಕಟವಾಗುತ್ತಿದ್ದ ಸುದ್ದಿ ಮಾಧ್ಯಮಗಳಲ್ಲಿ ಮಾತ್ರ ಬಳಕೆಯಾಗುತ್ತಿದ್ದ ‘ಅನ್ಯಮತೀಯ’ ಎಂಬ ಪದ ಈಗ ಕನ್ನಡ ನಾಡಿನ ಎಲ್ಲಾ ಮಾಧ್ಯಮಗಳಲ್ಲೂ ನಿತ್ಯವೆಂಬಂತೆ ಬಳಕೆಯಾಗುತ್ತದೆ. ಈ ‘ಅನ್ಯ’ರಲ್ಲಿರುವುದು ಯಾರೆಂದು ಈಗ ವಿವರಿಸಬೇಕಾದ ಅಗತ್ಯವೂ ಇಲ್ಲದಷ್ಟೂ ಎಲ್ಲವೂ ಸ್ಪಷ್ಟವಾಗಿಬಿಟ್ಟಿದೆ.
ಕುಂಬಳೆಯವರು ಮತೀಯ ದ್ವೇಷವನ್ನು ಕೆದಕುವ ಬೆಂಕಿ ಭಾಷಣಗಳನ್ನು ಹೆಚ್ಚಿನ ಮಟ್ಟಿಗೆ ರಾಜಕೀಯ ವೇದಿಕೆಗೆ ಸೀಮಿತವಾಗಿಟ್ಟಿದ್ದರು. ಈ ಕೃತಿಯಲ್ಲಿ ಆನುಷಂಗಿಕವಾಗಿ ಪ್ರಸ್ತಾಪವಾಗಿರುವ ಇತರ ಉದಾಹರಣೆಗಳು ರಂಗಸ್ಥಳದ ಮೇಲೇ ಆಡಿದಂಥವು. ಇವುಗಳನ್ನು ಆಡಿದವರು ವೈಯಕ್ತಿಕ ಬದುಕಿನಲ್ಲಿ ಬಹಳ ಕ್ರೂರಿಗಳೇನೂ ಆಗಿರಬೇಕಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುವ ಸಾಧ್ಯತೆಯೇ ಹೆಚ್ಚು. ರಂಗದ ಮೇಲಿನಿಂದ ಆಡುವ ಮಾತಿಗೆ ರಂಗದ ಕೆಳಗಿನಿಂದ ಬರುವ ಚಪ್ಪಾಳೆಗಳು ಅವರ ಮಾತಿನ ತೀಕ್ಷ್ಣತೆಯನ್ನು ಹೆಚ್ಚಿಸುತ್ತಲೇ ಹೋಗುತ್ತವೆ. ಹೀಗೆ ಚಪ್ಪಾಳೆ ಹೊಡೆಯುವವರೂ ಸಾಮಾನ್ಯರೇ. ಫ್ಯಾಸಿಸಂ ಮಾಮೂಲಿನ ಸಂಗತಿಯಾಗಿಬಿಡುವುದೇ ಹೀಗೆ. ಸಾಂಸ್ಕೃತಿಕ ಬದುಕಿನಲ್ಲಿ ಕೇಡು ಮಾಮೂಲಿತನವಾದಾಗ ಸಾಯುವುದು ಮನುಷ್ಯರಷ್ಟೇ ಅಲ್ಲ. ಇಲ್ಲಿ ಚಿಂತನೆಯ ವಿವೇಕವೂ ಕೊನೆಯುಸಿರೆಳೆಯುತ್ತದೆ.



Hey Thej: Thanks for reading.