ಅಮ್ಮ ಹಾಗು ಮನುಷ್ಯನ ಪ್ರಯತ್ನ
ಅಮ್ಮನಿಗೆ ತುಂಬ ನಂಬಿಕೆಯಿದ್ದದ್ದು ಮನುಷ್ಯನ ಪ್ರಾಮಾಣಿಕ ಪ್ರಯತ್ನದ ಮೇಲೆ. ಹಾಗಂತ ಆಕೆಯೇನು ನಾಸ್ತಿಕಳಾಗಿರಲಿಲ್ಲ. ಆಕೆಯ ದೇವರ ಕಲ್ಪನೆ ಸ್ವಲ್ಪ ವಚನಕಾರರನ್ನು ಹೋಲುತಿದ್ದದ್ದು ಕಾಕತಾಳಿಯವೇನಲ್ಲ. ಕೆಲಸ, ಶಿಸ್ತು, ಪ್ರಾಮಾಣಿಕತೆ, ದುಡಿಮೆ, ಸಮಾನತೆ ಹಾಗು ಮನುಷ್ಯ ಪ್ರಯತ್ನಗಳ ಮೇಲೆ ಆಕೆಗೆ ನಂಬಿಕೆ ಜಾಸ್ತಿ.
ಅಮ್ಮ ಕೆಲವು ಹಬ್ಬ, ಹರಿದಿನಗಳನ್ನು ಸಂಭ್ರಮದಿಂದ ಆಚರಿಸುತಿದ್ದರು (ಸಂಕ್ರಾಂತಿ ಹಾಗು ಯುಗಾದಿ ಆಕೆಯ ನೆಚ್ಚಿನ ಹಬ್ಬಗಳು), ಆಕೆಯ ದೇವರ ಮೇಲಿನ ನಂಬಿಕೆ ಮೂಢನಂಬಿಕೆಗಳಾಗಿರಲಿಲ್ಲ. ಆಕೆ ಒಂದು ದಿನವೂ ವಿಗ್ರಹದ ಮುಂದೆ ಕುಳಿತು ಪ್ರಾರ್ಥನೆ ಮಾಡಿದ್ದು ನಾ ಕಂಡಿಲ್ಲ. ಹೆಚ್ಚೆಂದರೆ ಎಲ್ಲಿ ಕುಳಿತಿದ್ದರೂ, ಯಾವ ಕೆಲಸ ಮಾಡುತ್ತಿದ್ದರೂ, ಆಗಲೇ ಮನಸ್ಸಿನಲ್ಲಿ ಕೈಮುಗಿಯುತ್ತಿದ್ದಳೇನೋ. ನಾವು ಬೆಳೆದು, ನಮಗೆ ಬುದ್ಧಿ ಬಂದ ಮೇಲೆ ಯಾವುದನ್ನೂ ನಮ್ಮ ಮೇಲೆ ಹೇರಿರಲಿಲ್ಲ. ಒಮ್ಮೆಯೂ ನನಗೆ ಪೂಜೆ ಮಾಡಲು ಒತ್ತಾಯ ಮಾಡಿರಲಿಲ್ಲ. ಆದರೆ ಒಂದು ದಿನ ಕೆಲಸಕ್ಕೆ ಹೋಗದಿದ್ದರೆ, ಏನಯಿತೆಂದು ವಿಚಾರಿಸುತಿದ್ದಳು. “ಕಾಯಕವೇ ಕೈಲಾಸ” ಅನ್ನುವುದನ್ನು ಅಕ್ಷರಶಃ ನಂಬಿದ್ದವಳು ಅಮ್ಮ. ಅದನ್ನೇ ನಮಗೂ ಕಲಿಸಿದಳು.
ನನ್ನ ಮದುವೆಯ ದಿನದಂದೂ ಸಹ ಅಮ್ಮ ತುಂಬಾ ಸಂತೋಷ ಪಟ್ಟಿದ್ದಳು. ಚಿಕ್ಕ ಮದುವೆ, ಹೊಸ ಆಚಾರ, ನನ್ನ ಗಡ್ಡ, ನಾನು ಅರಿಶಿನದ ಸ್ನಾನವನ್ನು ವಿರೋಧಿಸಿದ್ದು - ಇವು ಯಾವುದೂ ನನ್ನ ಮೇಲೆ ಆಕೆಗಿದ್ದ ಹೆಮ್ಮೆಯನ್ನು ಕಡಿಮೆ ಮಾಡಲಿಲ್ಲ. ಅದಕ್ಕೆ ನಾನು ಸದಾ ಋಣಿ.
ನನಗಿನ್ನು ಜ್ಞಾಪಕವಿದೆ, ನನ್ನ ಮೊದಲ ಕೆಲಸಕ್ಕೆ ಸೇರಿದಾಗ, ಆಕೆಯ ಆಗಿನ ಸಂಬಳ ಹಾಗೂ ನನ್ನ ಸಂಬಳ ಒಂದೇ ಇತ್ತು. ನನ್ನ ಕೆಲಸದ ಬಗ್ಗೆಯೂ ತುಂಬ ಹೆಮ್ಮೆ ಇತ್ತು ಆಕೆಗೆ. ಅದಕ್ಕೆ ಅಂದು ಆಕೆ ಹೇಳಿದ ಮಾತು ಇನ್ನೂ ಇವತ್ತಿಗೂ ಗುನುಗುಟ್ಟುತ್ತ ಇದೆ - “ಪಡೆಯುವ ಸಂಬಳಕ್ಕೆ ಮೋಸ ಆಗಬಾರದು. ನಾನು ಕೆಲಸಕ್ಕಾಗಿ ಅಲೆದಾಡಿದ್ದೇನೆ. ನಿನಗೆ ಒಲಿದು ಬಂದಿದೆ, ಕಾಪಾಡಿಕೊ”. ನಾನು ಅದನ್ನು ಕಾಪಾಡಿಕೊಂಡು ಬಂದಿದ್ದೇನೆ. ಇತ್ತೀಚೆಗೆ ನಾನು ಮಾಡುವ ಕೆಲಸದ ಬಗ್ಗೆ ಆಕೆಗೆ ಅಷ್ಟೇನೂ ಗೊತಿಲ್ಲದಿದ್ದರೂ ಕೂಡ, “ನನ್ನ ಮಕ್ಕಳು ಸರಿ ದಾರಿಯಲ್ಲಿ ಇದ್ದಾರೆ” ಅನ್ನುವ ಅಚಲ ನಂಬಿಕೆ ಆಕೆಯದು.
ಅಮ್ಮ ಸ್ತ್ರೀವಾದಿ. ಆದರೆ ಅವಳು ಅದನ್ನು ಸಮಾನತೆ ಅಂದುಕೊಂಡ್ದಿದ್ದಳು. ಯಾವತ್ತೂ ನಾನು ಸ್ತ್ರೀವಾದಿ ಎಂದು ಧೋರಣೆಯಿಂದ ಮಾತನಾಡಲಿಲ್ಲ. ಆಕೆಯ ಕಾರ್ಯಗಳೇ ಆದನ್ನು ವ್ಯಕ್ತಪಡಿಸುತ್ತಿದ್ದವು. ನನ್ನ ತಂಗಿ ಹಾಗು ನನ್ನನ್ನು ಸಮನಾಗಿ ಬೆಳೆಸಿದ್ದಳು. ನಮ್ಮಲ್ಲಿ ಇವತ್ತು ಕಿಂಚಿತ್ತಾದರೂ ಸಮಾನತೆಯ ಅರಿವಿದೆ ಎಂದರೆ ಅದಕ್ಕೆ ಅಮ್ಮನೇ ಕಾರಣ.
ಹಾಗಂತ ಅಮ್ಮ ತುಂಬಾ ಪ್ರಗತಿಪರಳೇನು ಆಗಿರಲ್ಲಿಲ್ಲ. ಆಕೆಗೆ ಅವಳದೇ ಆದ ಮಿತಿಗಳಿದ್ದವು. ಹೊಸ ವಿಚಾರ, ಆಚಾರಗಳಿಗೆ ಮುಕ್ತ ಮನಸ್ಸಿನಿಂದ ತೆರೆದುಕೊಳ್ಳುತಿದ್ದಳು. ಅಮ್ಮನ ಜೊತೆ ನಾನು ತಾಳಿಯ ಬಗ್ಗೆ ಮಾತನಾಡಿದ್ದು ಇನ್ನೂ ಹಸಿರಾಗಿದೆ. ಅಮ್ಮನ ಹುಟ್ಟಿ ಬೆಳದ ಪರಿಸರದಲ್ಲಿ ತಾಳಿಗೆ ತುಂಬಾ ಮಹತ್ವ ಇತ್ತು. ನನ್ನ ಮದುವೆಯ ನಂತರ ಅಂಜು ತಾಳಿ ಧರಿಸಿದ್ದು ಕಡಿಮೆಯೇ. ಅದರ ಬಗ್ಗೆ ಅಮ್ಮ ಹಾಗೂ ನಾನು ಮಾತನಾಡಿದ್ದು ಒಮ್ಮೆ ಮಾತ್ರ. ಅದೂ ಕೂಡ ಮನುಷ್ಯನ ಸಂಬಂಧಗಳು “ಮನುಷ್ಯನ ಪ್ರಯತ್ನ” ಅಂತಲೇ ಅಮ್ಮ ಮಾತು ಮುಗಿಸಿದ್ದಳು.
ಉಳ್ಳವರು ಶಿವಾಲಯ ಮಾಡಿಹರು,
ನಾನೇನ ಮಾಡುವೆ ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಲಶವಯ್ಯಾ.
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.
- ಬಸವಣ್ಣ