ನನ್ನ ಕನ್ನಡ ದಿನ ಪತ್ರಿಕೆ

ನಮ್ಮನೆಯಲ್ಲಿ ಮೊದಲಿಂದಲೂ ಕನ್ನಡ ದಿನ ಹಾಗು ವಾರ ಪತ್ರಿಕೆಗಳನ್ನು ಕೊಳ್ಳುವ ಹಾಗೂ ಓದುವ ಹವ್ಯಾಸ ಇತ್ತು. ಸುಧಾ, ತರಂಗ, ಲಂಕೇಶ್ ಮುಂತಾದ ವಾರಪತ್ರಿಕೆಗಳ ಜೋತೆ ಕನ್ನಡ ಪ್ರಭ, ಶಾಲೆಯಲ್ಲಿ ಹಿಂದೂ, ಟೈಮ್ಸ್ ಆಫ್ ಇಂಡಿಯಾ, ಪ್ರಜಾವಾಣಿ ಇನ್ನೂ ಮುಂತಾದವು. ಸಮಯ ಬದಲಾದಂತೆ, ಪತ್ರಿಕೆಯು ಬದಲಾಯಿತು. ನಂತರ ವಿಜಯ ಕರ್ನಾಟಕ ಬಂತು. ಈಗ ಸದ್ಯಕ್ಕೆ ವಿಜಯವಾಣಿ ಓಡುತ್ತಿದೆ ನನ್ನ ತಾಯಿ ಮನೇಲಿ.

ನನ್ನ ಮದುವೆ ನಂತರ ಕನ್ನಡ ಪತ್ರಿಕೆ ತರಿಸುವ ಜವಾಬ್ದಾರಿ ನನ್ನ ಮೇಲೆ ಬಿತ್ತು. ನನ್ನಾಕೆ ಮಲೆಯಾಳಿ ಆಕೆಗೆ ಕನ್ನಡ ಓದಲು ಬರಲ್ಲ. ಹಾಗಾಗಿ ನನ್ನದೇ ನಿರ್ಧಾರ ಮತ್ತು ನನ್ನದೇ ಜವಾಬ್ದಾರಿ. ಇದ್ಯಾವ ಮಹಾ ವಿಷಯ ಯಾವುದೋ ಒಂದು ತರಿಸಿದ್ರೆ ಆಯ್ತಲ್ಲ ಅನ್ನಬಹುದು ತಾವು. ಅಲ್ಲೇ ಇರೋದು ಸ್ವಾರಸ್ಯ. ಮನೆಯಲ್ಲಿ ಟೀ ಟೇಬಲ್ ಮೇಲಿನ ಪತ್ರಿಕೆ ಮನೆಯವರ ಬಗ್ಗೆ ತುಂಬಾನೆ ಹೇಳುತ್ತೆ. ಅವರ ಇಷ್ಟಗಳು, ಬೆಲೆ ಕೊಡುವ ಮೌಲ್ಯಗಳು, ಅದರ ಪ್ರತಿಫಲನ ಪತ್ರಿಕೆ. ಹಾಗಾಗಿ ಅದು ಮಹಾ ಜವಾಬ್ದಾರಿ.

ಚಿಕ್ಕಂದಿನಿಂದಲೂ ಕನ್ನಡ ಪ್ರಭ ಓದಿ, ಬೆಳೆದ ನನಗೆ ಅದರ ಮೇಲಿನ ಅಭಿಮಾನ ಇನ್ನೂ ಇತ್ತು. ಆದರೆ ಕಳೆದ ಅರ್ಧ ದಶಕದಲ್ಲಿ ಅದರಲ್ಲಿ ಮೂಡಿ ಬಂದ ಅಂಕಣಗಳೂ ಹಾಗೂ ಜನರನ್ನು ವಿಭಾಗಿಸುವ ರೀತಿಯಲ್ಲಿ; ಜನಭಿಪ್ರಾಯವನ್ನು ಮೂಡಿಸಲು ಬಗೆ, ನನ್ನಲ್ಲಿ ಅತೃಪ್ತಿ ಹುಟ್ಟಿ ಹಾಕಿತ್ತು. ಕನ್ನಡ ಪ್ರಭ ನನ್ನ ಆಯ್ಕೆ ಆಗಲಿಲ್ಲ. ನಾನು ಕನ್ನಡ ಪ್ರಭದಲ್ಲಿ ಬಂದ ಒಂದು ಅಂಕಣದ ಬಗ್ಗೆ ಬೇಸರಿಸಿಕೊಂಡು ಬ್ಲಾಗ್ ಬರೆದಿದ್ದು ನಿಮಗೆ ನೆನಪಿರಬಹುದು. ಅದರಲ್ಲಿ ಆಂಕಣಗಾರ ಸಲಿಂಗಿಯರನ್ನು ರೋಗಿಗಳು ಅಂತ ಕರೆದಿದ್ದರು. ಆತ ನಮ್ಮ ಎಂ.ಪಿ ಕೂಡ. ಹಾಗಗಿ ನಾನು ಕನ್ನಡ ಪ್ರಭಕ್ಕೆ ತಲೆ ಕೆಟ್ಟಿದೆ ಅಂದಿದ್ದೆ. ಆ ಘಟನೆ ನನ್ನ ಅನುಮಾನಗಳನ್ನು ನಿಜವಾಗಿಸಿದ್ದವು.

ಅದ್ಯಾವುದಯ್ಯ ಮಹಾ ಪತ್ರಿಕೆ ನೀನು ಓದುವುದು? ಅಂತ ನೀವು ಕೇಳುವ ಮೊದಲೇ ಹೇಳಿ ಬಿಡ್ತೇನೆ. ಪ್ರಜಾವಾಣಿ. ಮತ್ತೆ ಈಗ್ಯಾಕೆ ಇದರ ಬಗ್ಗೆ ಬರೀತಿದ್ದೀನಿ ಅಂದರೆ, ಅದಕ್ಕೂ ಕಾರಣ ಅಂಕಣಗಳು ಹಾಗೂ ಲೇಖನಗಳು. ಕೆಲವೊಂದು ಉದಾಹರಣೆಗಳನ್ನು ಉಲ್ಲೇಖಗಳ ಜೋತೆ ಕೊಟ್ಟಿದ್ದೇನೆ, ಇವು ಕೂಡ ಸಲಿಂಗಿಯರನ್ನು ಕುರಿತಾತದ್ದೆ. ಓದಿ. ವ್ಯತ್ಯಾಸ ಬಹಳ ಸ್ಪಷ್ಟವಾಗಿ ಕಾಣಿಸುತ್ತದೆ.

ಪ್ರಜಾವಾಣಿ

ಪ್ರಜಾವಾಣಿ

‘ಗೇ’ಗಳ ಬದುಕಿನ ಕಡಲಲಿ ಅಳು–ನಗುವಿನ ಹಾಯಿದೋಣಿ

‘ಗೇ’ ವ್ಯಕ್ತಿಗಳ ಬದುಕಿನ ಬಗ್ಗೆ ಸಮಾಜಕ್ಕೆ ಇರುವ ಕುತೂಹಲ, ಅಜ್ಞಾನ, ಭಯ ಅಷ್ಟಿಷ್ಟಲ್ಲ. ಸಮಾಜದ ಈ ಅಜ್ಞಾನ – ಆತಂಕಗಳು ‘ಗೇ’ಗಳ ಬದುಕಿನಲ್ಲಿ ನಗುವನ್ನೂ ಅಳುವನ್ನೂ ಉಂಟುಮಾಡುತ್ತವೆ. ತಮ್ಮ ಬದುಕಿನಲ್ಲಿ ಎದುರಾದ ಅಂಥ ತಮಾಷೆಯ ಪ್ರಸಂಗಗಳನ್ನು ಕಥೆಗಾರ ವಸುಧೇಂದ್ರ ನೆನಪು ಮಾಡಿಕೊಂಡಿದ್ದಾರೆ.

‘ಗೇ’ಯತೆ-ಸಲಿಂಗಕಾಮ ಮನೋವ್ಯಾಧಿಯೇ?!

....
ಇದರ ಆಧಾರವಾದರೂ ಏನು? ಇಲ್ಲಿಯವರೆಗೆ ನಡೆದ ಸಂಶೋಧನೆಗಳು, ಸತತವಾದ ಅವಲೋಕನ ಸಮಾಜ ಒಪ್ಪಿಕೊಂಡರೆ, ಯಾವುದೇ ತಾರತಮ್ಮ ತೋರದಿದ್ದರೆ ಸಲಿಂಗಕಾಮಿಗಳು ಇತರ ಎಲ್ಲರಂತೆ ಸಹಜಜೀವನ ನಡೆಸಲು ಸಾಧ್ಯವಿದೆ ಎನ್ನುವುದನ್ನು ತೋರಿಸಿದೆ. ಹಾಗಿದ್ದೂ ಮಾನಸಿಕ ಸಮಸ್ಯೆಗಳು, ಮಾದಕದ್ರವ್ಯ ವ್ಯಸನಗಳು ‘ಗೇ’ಯತೆಯಲ್ಲಿ ಹೆಚ್ಚು.

ಇದಕ್ಕೆ ಮುಖ್ಯ ಕಾರಣ ಅವರ ‘ಲೈಂಗಿಕ ಮನೋಭಾವ’ಕ್ಕಿಂತ, ಆತ್ಮೀಯರು, ಕುಟುಂಬದವರು ಸುಲಭವಾಗಿ ಈ ಸ್ಥಿತಿಯೊಡನೆ ಹೊಂದಿಕೊಳ್ಳದಿರುವುದು. ಸಂಗಾತಿಗಳ ಕೊರತೆ, ತಾನು ‘ಹೀಗೆ’ ಎಂಬುದನ್ನು ಹೇಳಿಕೊಳ್ಳಲು ಹೆದರುವ, ಒಳಗೆ ತೊಳಲಾಡುವ ಒತ್ತಡ, ಸಾರ್ವಜನಿಕವಾಗಿ ಒಪ್ಪಿಕೊಂಡ ನಂತರವೂ ಉದ್ಯೋಗ ಮತ್ತು ಮನೆ ದೊರೆಯಲು ಎದುರಾಗುವ ಸಮಸ್ಯೆಗಳು – ಇವು ಮಾನಸಿಕವಾಗಿ ಖಿನ್ನತೆ ತರಬಲ್ಲವು.
....
....
‘ಸಲಿಂಗಕಾಮ’ವನ್ನು ಸಮಾಜ ಒಪ್ಪಿಕೊಳ್ಳುವುದು ಸುಲಭವಲ್ಲ. ಹೇಗೆ ಎಲ್ಲರಿಂದ ಬೇರೆಯಾದದ್ದನ್ನು ನಾವು ‘ಬೇರೆ’ಯೇ ಆಗಿ ನೋಡುತ್ತೇವೆಯೋ ಅದೂ ‘ಲೈಂಗಿಕತೆ’ಗೆ ಸಂಬಂಧಿಸಿದ್ದರಲ್ಲಿ ನಮಗೆ ಒಪ್ಪಿಕೊಳ್ಳುವುದು ಕಷ್ಟ. ಆದರೆ ನಮಗಿಷ್ಟವಿರಲಿ–ಇಲ್ಲದಿರಲಿ, ಒಪ್ಪಲಿ-ಬಿಡಲಿ, ಪ್ರಾಕೃತಿಕವಾಗಿ ಲೈಂಗಿಕತೆಯ ಸಹಜ ಭೇದವಾದ ‘ಸಲಿಂಗಕಾಮ’ - ‘ಗೇ’ಯತೆಯನ್ನು ಹೊಂದಿದ ವ್ಯಕ್ತಿಗಳನ್ನು ಎಲ್ಲ ’ಮನುಷ್ಯ’ರಂತೆ ಮಾನವೀಯ ನೆಲೆಯಲ್ಲಿ ಕಾಣಬೇಕಾದ ಅಗತ್ಯವಿದೆ.

ಮೋಹನಸ್ವಾಮಿ ಎನ್ನುವ ಮಿಥ್ಯೆಯೂ ನಿಜವೂ...

ಹದಿನೆಂಟು ವರ್ಷಕ್ಕೆ ಆಗಬೇಕಿದ್ದ ವಿಮೋಚನೆ ನಲವತ್ತೈದನೇ ವಯಸ್ಸಿಗೆ ಆಯ್ತು. ನನ್ನಂತೆ ಇನ್ನೊಂದು ಮಗು ಕಷ್ಟ ಪಡಬಾರದು. ಕೆಲವು ಮಕ್ಕಳು ತಮ್ಮ ಸಂಕಟಗಳನ್ನು ಯಾರೊಂದಿಗೂ ಹೇಳಿಕೊಳ್ಳಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹಾಗಾಗಬಾರದು
....
....
....
ಪ್ರಶ್ನೆಗಳಲ್ಲಿನ ಹಿಂಜರಿಕೆಯನ್ನು ನಿವಾರಿಸುವಂತೆ– ‘‘ಮೋಹನಸ್ವಾಮಿ ನನ್ನದೇ ಬದುಕಿನ ಕಥೆ. ಆ ಸಂಕಲನದ ಕಥೆಗಳಲ್ಲಿ ನನ್ನ ಬದುಕು ಹಾಗೂ ಕಲ್ಪನೆ ಎರಡೂ ಇದೆ. ನಾನು ‘ಗೇ’ ಎನ್ನುವುದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಆದರೆ ಅದನ್ನು ಒಪ್ಪಿಕೊಳ್ಳುವುದು ತುಂಬಾ ತಡವಾಯಿತು. ವಿಷಯವನ್ನು ಮುಚ್ಚಿಟ್ಟುಕೊಂಡ ಕಾರಣದಿಂದಲೇ ಖಿನ್ನತೆಗೆ ಒಳಗಾದೆ’’ ಎಂದರು ವಸುಧೇಂದ್ರ.

‘‘ಹದಿಮೂರನೆ ವಯಸ್ಸಿನ ವೇಳೆಗಾಗಲೇ ನನ್ನ ದೇಹದ ಭಾಷೆ ನನಗೆ ಅರ್ಥವಾಯಿತು. ಆದರೆ ನನ್ನದಲ್ಲದ ತಪ್ಪಿಗಾಗಿ ದೀರ್ಘ ಕಾಲ ಶಿಕ್ಷೆ ಅನುಭವಿಸಿದೆ. ಆ ತಳಮಳದಿಂದ ಹೊರಬರುವುದು ಸಾವು ಬದುಕಿನ ಪ್ರಶ್ನೆ ಅನ್ನಿಸಿತು. ಇ.ಎಂ. ಫಾಸ್ಟರ್ ಕೂಡ ಇಂತಹುದೇ ಸಂಕಟ ಅನುಭವಿಸಿದ್ದ. ಅವನು ಕಾದಂಬರಿಯೊಂದರ ಮೂಲಕ ತನ್ನ ಸಾವಿನ ನಂತರ ‘ತಾನು ಗೇ’ ಎನ್ನುವ ವಿಷಯ ಪ್ರಕಟಗೊಳಿಸಿದ. ಆದರೆ ನಾನು ಸತ್ತ ನಂತರ ಸತ್ಯ ಬಯಲಾಗುವುದು ಬೇಕಿರಲಿಲ್ಲ. ಸತ್ಯ ಹೇಳಿಕೊಳ್ಳಲಿಕ್ಕೆ ಬರವಣಿಗೆಯೊಂದೇ ದಾರಿ ಎನ್ನಿಸಿತು. ಈ ರೀತಿ ‘ಮೋಹನಸ್ವಾಮಿ’ ಕಥೆಗಳು ನನ್ನಿಂದ ಬರೆಸಿಕೊಂಡವು.

ನನ್ನ ದಿನ ಪತ್ರಿಕೆಯ ಆಯ್ಕೆಯ ಬಗ್ಗೆ ನನಗೆ ಹೆಮ್ಮೆ ಇದೆ. ಅದು ಬಿಡಿ ನೀವು "ಮೋಹನಸ್ವಾಮಿ" ಓದಿದ್ದೀರಾ?

1 Response

  1. August 2, 2016

    […] ನನ್ನ ಕನ್ನಡ ದಿನ ಪತ್ರಿಕೆ thejeshgn.com/2016/08/02/nan… […]