ನಾನು ಹಿಂದೂ ಅಲ್ಲ. ವಿಶ್ವ ಮಾನವ

Kuvempu receiving the Jnanpith Award.

ಕುವೆಂಪು ಅವರು ಮನುಜ ಮತ ಮತ್ತು ವಿಶ್ವಪಥದ ಬಗ್ಗೆ ಮಾತನಾಡುತ್ತಿರುವ ಈ ಸಂದರ್ಶನವನ್ನು ನಾನು ಈಗಷ್ಟೇ ಮೊದಲ ಬಾರಿಗೆ ಕೇಳಿದ್ದು. ಇದುವರೆಗೆ ಇವುಗಳ ಬಗ್ಗೆ ನಾನು ಅವರ ಪುಸ್ತಕಗಳಲ್ಲಿ ಮಾತ್ರ ಓದಿದ್ದೆ. ಹಾಗಾಗಿ, ನಾನು ಲಿಪ್ಯಂತರ(? transcribe) ಮಾಡಿ ಅದನ್ನು ಹೆಚ್ಚು ಜನರಿಗೆ ಲಭ್ಯವಾಗಿಸಲು ಇಲ್ಲಿ ಪ್ರಯತ್ನಿಸಿದ್ದೇನೆ1.


ಸಂದರ್ಶಕ: ಹಿಂದೂ ಧರ್ಮ ವಿಶ್ವ ಧರ್ಮ ಎಂದು ಕರೆಯಬಹುದೇ?

ಇಲ್ಲ. ನಿಮ್ಮ ಹಿಂದೂ ಧರ್ಮ ವಿಶ್ವ ಧರ್ಮ ಆಗಬೇಕಾಗಿದ್ದರೆ ವರ್ಣ ವ್ಯವಸ್ಥೆ, ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಗಳನ್ನು ಸಂಪೂರ್ಣವಾಗಿ ವಿಸರ್ಜಿಸಿದರೆ ಮಾತ್ರ ಅದು ಸಾಧ್ಯ. ವೇದಾಂತ ದರ್ಶನ ಮಾತ್ರ ಹಿಂದೂ ಧರ್ಮದ ತಾತ್ವಿಕ ಬಿತ್ತಿಯಾಗಬೇಕು. ಯಾವ ಹಿಂದೂವಾದರೂ, ಯಾವ ಮಠಕ್ಕಾಗಲಿ ಧಾರ್ಮಿಕ ಸಂಸ್ಥೆಗಾಗಲಿ, ಅಧಿಪತಿಯಾಗುವ ಅವಕಾಶವಿರತಕ್ಕಂತದ್ದು. ಈಗಿರುವಂತೆ ಜಾತಿ, ಮತ, ವರ್ಣಗಳಿಂದ ಕಲುಷಿತವಾಗಿರುವ ಹಿಂದೂ ಧರ್ಮ ವಿಶ್ವ ಧರ್ಮ ಎನಿಸಿಕೊಳ್ಳಲು ಆಗದು.

ಕ್ರಿಶ್ಚಿಯನ್ನರನ್ನು ಮುಸಲ್ಮಾನರನ್ನು ಪುನರ್ಮತಾಂತರಕರಿಸುವ ಸನ್ನಾಹ ಅಲ್ಲಿ ಇಲ್ಲಿ ನಡೀತಿರುವುದಷ್ಟೇ. ಅವರು ಮತ್ತೆ ಹಿಂದೂ ಧರ್ಮಕ್ಕೆ ಸೇರುವುದಾದರೆ ಸಮಾಜದಲ್ಲಿ ಅವರ ಸ್ಥಾನಮಾನಗಳೇನು? ಹರಿಜನರು ಹರಿಜನರಾಗಿಯೇ ಉಳಿಯುವ ಪಕ್ಷಕ್ಕೆ ಅವರೇಕೆ ಮರಳಿ ಬರಬೇಕು? ಅವರನ್ನು ಬ್ರಾಹ್ಮಣ ವರ್ಗಕ್ಕೆ ಸೇರಿಸಿಕೊಳ್ಳಲಾಗುತ್ತದೆಯೇ? ಹಾಗಿಲ್ಲದೆ ಇದ್ದ ಪಕ್ಷದಲ್ಲಿ ಪುನರ್ ಮತಾಂತರ ಮಾಡಿಸುವ ಜನ ವಂಚಕರಾಗುತ್ತಾರೆ. ಪುನರ್ ಮತಾಂತರ ಹೊಂದುವ ಜನ ಬೆಪ್ಪು ತಕ್ಕಡಿಗಳಾಗ್ತಾರೆ. ಅವರು ಮತ್ತೆ ಜಾತೀಯತೆಯ ವಿಷಕ್ಕೆ ಏಕೆ ಬಲಿಯಾಗಬೇಕು? ವರ್ಣ ವರ್ಗಗಳ ವ್ಯತ್ಯಾಸವಳಿದು, ಅಸ್ಪೃಶ್ಯತೆ ನಿರ್ಮೂಲನ ಆದಾಗ ಮಾತ್ರ ಹಿಂದೂ ಧರ್ಮ ಅದರ ನಿಯಮ ಆಗುತ್ತೆ2

ನನಗೆ ಯಾವ ಮತದ ಗೊಜೂ ಇಲ್ಲ. ನಾನು ಯಾವ ಮತಕ್ಕೂ ಸೇರಿದವನಲ್ಲ. ನನ್ನದು ಮನುಜ ಮತ. ವಿಶ್ವಪಥ. ನಾನು ಹಿಂದೂ ಅಲ್ಲ. ವಿಶ್ವ ಮಾನವ. ಮತವನ್ನು ತೊರೆದು ಅಧ್ಯಾತ್ಮ ಪಥವನ್ನು ಸ್ವೀಕರಿಸಿದ ಪ್ರತಿಯೊಬ್ಬ ವ್ಯಕ್ತಿಯೂ ವಿಶ್ವಮಾನವನಾಗುತ್ತಾನೆ. ಅಧ್ಯಾತ್ಮ ಕಾಲದೇಶಾತೀತವಾದದ್ದು, ಅದು ದೇಶದಿಂದ ದೇಶಕ್ಕೆ, ಜನಾಂಗದಿಂದ ಜನಾಂಗಕ್ಕೆ ವ್ಯತ್ಯಾಸವಾಗಲಾರದು. ರಸಾಯನ ಶಾಸ್ತ್ರ ಭೌತ ವಿಜ್ಞಾನದಂತೆ ಅಧ್ಯಾತ್ಮ ಸೂತ್ರಗಳು ವಿಶ್ವ ಮಾನ್ಯವಾಗಬೇಕು.


ಸಂದರ್ಶಕ:: ನೀವು ಈಚೆಗೆ ಪ್ರತಿಪಾದಿಸುತ್ತಿರುವ ಪಂಚಮಂತ್ರ, ಸಪ್ತ ಸೂತ್ರ ಹಾಗೂ ವಿಶ್ವ ಮಾನವ ಸಂದೇಶಗಳು ನಾಡಿನ ಹಾಗೂ ಲೋಕದ ನಾನಾ ಜಾಡ್ಯಗಳಿಗೆ ಸಿದ್ಧ ಔಷಧಿಗಳೆಂದು ಹೇಳಬಹುದೇ? ಅವುಗಳ ಸರ್ವಾನುಷ್ಠಾನ ಸಾಧ್ಯವೇ?

ಸರ್ವೋದಯವೇ ಸಕಲ ಸಾಧನೆಗಳ ಗುರಿಯಾಗಬೇಕು. ಪೂರ್ಣ ದೃಷ್ಟಿ ಮತ್ತು ಸಮನ್ವಯ ಭಾವದಿಂದ ಮೇಲು ಕೀಳುಗಳ ಭೇದ ಹರಿಯುತ್ತಿದೆ. ಮನುಷ್ಯನನ್ನು ಮನುಷ್ಯನಿಂದ ಬೇರ್ಪಡಿಸುವ ಹತ್ತಾರು ಮತ ಬೇಡ. ಅವನೇ ಕೇಂದ್ರವಾಗುಳ್ಳ ಮನುಜ ಮತ ಒಂದೇ ಸಾಕು. ಮನುಷ್ಯನಲ್ಲಿ ಗೊಂದಲ ಉಂಟುಮಾಡಿ, ಅವನ ಏಕಾಗ್ರತೆಗೆ ಭಂಗ ತರುವ ಎಲ್ಲಾ ತತ್ವಗಳನ್ನು ಮೀರಿದ, ಮಾನವೀಯ ಮೌಲ್ಯಗಳೇ ಗುರಿಯಾಗುಳ್ಳ, ವಿಶ್ವಪಥದಲ್ಲಿ ಮಾನವನಾಗಬೇಕು. ವರ್ಣ, ಜಾತಿ, ವರ್ಗಗಳನ್ನು ಸೃಷ್ಟಿಸುವ ಮತ ಬೇಡ. ಅಧ್ಯಾತ್ಮ ಸಾಧನೆಯೊಂದೇ ಮಾನವನ ಗುರಿಯಾಗಬೇಕು. ಆ ಈ ಜಾತಿಗಳೆಲ್ಲ, ಮನುಷ್ಯ ಜಾತಿಯಲ್ಲಿ, ಆ ಈ ಮತಗಳೆಲ್ಲ, ಮನುಜ ಮತದಲ್ಲಿ, ಒಂದಾಗಬೇಕು. 4000 ವರ್ಷಗಳಿಂದ ಮತ ಗುಂಪು ಕಟ್ಟುವ, ಜಗಳ ಹಚ್ಚುವ, ಮನ ಮನಗಳ ನಡುವೆ ಗೋಡೆ ಎಬ್ಬಿಸುವ, ದೇಶ ದೇಶಗಳನ್ನು ವಿಭಜಿಸುವ ಸಾಧನವಾಗಿದೆಯೇ ಹೊರತು ಎಲ್ಲ ಮಾನವರನ್ನು ಒಂದು ಮಾಡುವ ಶಕ್ತಿ ಆಗಿಲ್ಲ.

ರಾಜಕೀಯದಲ್ಲಿ, ವ್ಯಾಪಾರದಲ್ಲಿ ಗುಂಪುಗಾರಿಕೆ ಬೇಕಾಗಬಹುದಾದರೂ, ಒದ್ಯಾತು ವಿಚಾರದಲ್ಲಿ ಮಾತ್ರ ಬೇಡ. ವ್ಯಕ್ತಿಯ ಮತ್ತು ಭಗವಂತನ ನಡುವಣ ಸಂಬಂಧ ಅತ್ಯಂತ ನಿಗೂಢವಾದದ್ದು. ಅಂತೆಯೇ ವೈಯಕ್ತಿಕವಾಗಿದೆ. ತಮ್ಮ ಸಂಖ್ಯೆಯನ್ನು ಬೆಳೆಸಿಕೊಂಡು, ಗೂಂಪು ಕಟ್ಟಿ, ರಾಜಕೀಯ ಮಾಡುವ ಸಲುವಾಗಿ ಮತಾಂತರ ನಡೆಯುತ್ತಿದೆ. ಅಧ್ಯಾತ್ಮ ಎಂದು ಅದರ ಗುರಿಯಾಗಿಲ್ಲ. ಲೋಕದ ಎಲ್ಲ ಜಾಡ್ಯಗಳಿಗೂ ಮತೀಯ ರೂಪದ ವ್ಯವಸ್ಥೆಯೇ ಮೂಲ ಕಾರಣ. ಚೇತನ ಅನಿಕೇತನವಾದಾಗ, ಅಂದರೆ ಲೌಕಿಕವಾದ, ಆತ್ಮ ವಿನಾಶಕಾರಿಯಾದ, ಎಲ್ಲ ವ್ಯವಸ್ಥೆಗಳಿಂದ ಪಾರಾದಾಗ, ಮತ ಮನುಜ ಮತವಾದಾಗ, ಮನುಷ್ಯ ವಿಶ್ವ ಮಾನವನಾದಾಗ, ಎಲ್ಲ ವೈಯಕ್ತಿಕ, ಸಾಂಸ್ಠಿಕ, ದ್ವಿರಸ ವೈಷಮ್ಯಗಳು ತೊಲಗುತ್ತವೆ.

ಪ್ರತಿ ವ್ಯಕ್ತಿಯ ಉದ್ದಾರವೇ ವಿಶ್ವಮಾನವನ ಗುರಿ. ಅದು ವೈಯಕ್ತಿಕವಾದದ್ದೆ ಹೊರತು ಸಾಂಸ್ಠಿಕವಾದದ್ದಲ್ಲ. ವ್ಯಕ್ತಿಕರಣದ ಮೂಲಕ ಅದು ತನ್ನ ಗುರಿಯನ್ನು ಸಾಧಿಸುತ್ತದೆ.

ಅದೊಂದು ಮತವಾಗಬಾರದು. ಅದರ ಸ್ವರೂಪ ಲಕ್ಷಣಗಳನ್ನು ಕುರಿತು ಪ್ರಸಾರ ಮಾಡಬಹುದೇ ಹೊರತು, ಅದರ ಹೆಸರಿನಲ್ಲಿ ಗುಂಪುಗಾರಿಕೆ ಸಲ್ಲದು. ಸಂಘ ಸಂಸ್ಥೆಗಳ ಪ್ರತಿಷ್ಠಾಪನೆ ಕೂಡದು. ವ್ಯಕ್ತಿಯೇ ಕೇಂದ್ರವಾದ್ದರಿಂದ, ಮತರೂಪವಾದ ಸಾಮೂಹಿಕ ಪರಿವರ್ತನೆಗೆ ಅದು ವಿರೋಧಿ.

ತಾನೊಬ್ಬ ವಿಶ್ವಮಾನವ, ಯಾವ ಮತಕ್ಕೂ ಸೇರಿದವನಲ್ಲ ಎಂಬ ಭಾವನೆ ಪ್ರತಿಯೊಬ್ಬರಲ್ಲಿಯೂ ಮೂಡಿದಾಗ ಅನೇಕ ರಾಜಕೀಯ, ಸಾಮಾಜಿಕ, ಆರ್ಥಿಕ ಜಾಡ್ಯಗಳು ಕಡೆಗೊಳ್ಳುವುದಲ್ಲದೆ ಮಾನಸಿಕ ಶಾಂತಿ ದೊರೆಯುತ್ತದೆ. ವ್ಯಕ್ತಿಯ ಮಾನಸಿಕ ಶಾಂತಿಯೇ, ವಿಶ್ವ ಶಾಂತಿಗೆ ಬುನಾದಿ ಆಗುತ್ತದೆ. ಅಧ್ಯಾತ್ಮದ ವೈಯಕ್ತೀಕರಣವೇ ವಿಶ್ವ ಮಾನವ ಸಂದೇಶದ ತಿರುಳು.


ನಾನು ಹಿಂದೂ ಅಲ್ಲ. ವಿಶ್ವ ಮಾನವ.

You can read this blog using RSS Feed. But if you are the person who loves getting emails, then you can join my readers by signing up.

Join 2,259 other subscribers

  1. ನಿಮಗೆ ಯಾವುದೇ ತಪ್ಪುಗಳು ಕಂಡು ಬಂದರೆ, ದಯವಿಟ್ಟು ತಿದ್ದುಪಡಿಗಳನ್ನು ಕಳುಹಿಸಿ.
  2. ಅಷ್ಟು ಸ್ಪಷ್ಟವಾಗಿಲ್ಲ, ನೀವೆ ಕೇಳಿ, ಅರಿತುಕೊಳ್ಳಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.