ಸುಟ್ಟ ಜೋಳ ಮತ್ತು ಕಾರ ಹಾಕಿದ ಮಾವಿನಕಾಯಿ

ಮುತ್ತಾನಲ್ಲೂರು ಬಿಟ್ಟ ಮೇಲೆ ನಾವು ಹೆಬ್ಬಗೋಡಿಗೆ ಬಂದೆವು. ಅಪ್ಪ, ಅಮ್ಮ ಇಬ್ಬರಿಗೂ ಆನೇಕಲ್ ಹತ್ತಿರ ಕೆಲಸ. ಮುತ್ತಾನಲ್ಲೂರು ಬಿಡುವಾಗಲೆ ಅಪ್ಪನಿಗೆ ಆನೇಕಲ್‌ಗೆ ಸ್ಥಳಾಂತರವಾದರೆ ಅನುಕೂಲ ಎನ್ನುವ ಯೋಚನೆ. ಅದರೆ ಅಮ್ಮನಿಗೆ ಅಲ್ಲಿಯ ಯಾವುದೇ ಶಾಲೆ ಇಷ್ಟವಾಗಲಿಲ್ಲ. ಅವಳ ಕಾನ್ವೆಂಟ್ ಶಾಲೆಯ ಒಳ್ಳೆಯ ಅನುಭವದ ಹಿನ್ನಲೆಯೋ ಏನೋ, ಕಾನ್ವೆಂಟ್ ಶಾಲೆಗಳ ಮೇಲೆ ಅಪಾರ ನಂಬಿಕೆ. ಅಮ್ಮ ನಮ್ಮನ್ನು ಎಸ್.ಎಫ್.ಎಸ್ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದಳು. ಆಗ ನಾನು ಮೂರನೆಯ ಹಾಗು ತಂಗಿ ಎರಡನೆಯ ತರಗತಿ.

ಮೊದಲ ಬಾರಿಗೆ ಸಮವಸ್ತ್ರ, ಶೂ ಧರಿಸಿ, ಅಷ್ಟೊಂದು ಪುಸ್ತಕದ ಬ್ಯಾಗು ಹೊತ್ತುಕೊಂಡು ಶಾಲೆಗೆ ಹೋಗುವ ಸಂಭ್ರಮ ನಮ್ಮದು. ಅದರೆ “ಶಾಲೆ ೩:೩೦ಗೆ ಬಿಡುತ್ತದೆ, ನಾವು ಬರೋದು ಆರಾಗುತ್ತಲ್ಲ! ಅಲ್ಲಿಯವರೆಗೂ ಮಕ್ಕಳು ಹೇಗೆ” ಅನ್ನುವ ಚಿಂತೆ ದಂಪತಿಗಳದ್ದು.

ಬೆಳಿಗ್ಗೆ ಆರಕ್ಕೆ ಎದ್ದು, ಸ್ನಾನ, ಅಡುಗೆ ಮಾಡಿ, ಸುಮಾರು ೭:೩೦ ಹೊತ್ತಿಗೆ, ಮುದ್ದೆ, ಅನ್ನ ಸಾರಿನ ಮೂರು ಬಾಕ್ಸನ ಸ್ಟೀಲ್ ಕ್ಯಾರಿಯರ್ ಕಟ್ಟಿ ಅಪ್ಪನನ್ನು ಮೊದಲು ಸಾಗು ಹಾಕುತ್ತಿದ್ದಳು. ನಂತರ ನಮಗೆ ಬೆಳಗಿನ ಉಪಾಹಾರ. ಸುಮಾರು ೮:೩೦ಗೆ ನಮ್ಮನ್ನು ಶಾಲೆಯ ಬಸ್ಸಿಗೆ ಹತ್ತಿಸಿದ ಮೇಲೆ ‘ಗಿರಿಜಾಶಂಕರ್’ ಬಸ್ಸು ಹಿಡಿದು ಅಮ್ಮ ಸಮಯಕ್ಕೆ ಸರಿಯಾಗಿ ಆನೇಕಲ್ ಹತ್ತಿರದ ಹಳ್ಳಿಯೊಂದಕ್ಕೆ ಸಮಯಕ್ಕೆ ಸರಿಯಾಗಿ ತಲುಪುತ್ತಿದ್ದುದು ಒಂದು ಅದ್ಭುತವೇ ಸರಿ.

ಸಾಯಂಕಾಲ ೩:೩೦ಗೆ ಎಲ್ಲರ ಶಾಲೆ ಮುಗಿದರೂ ನಮ್ಮ ಶಾಲೆ ಮುಗಿಯುತ್ತಿರಲಿಲ್ಲ. ಅಮ್ಮನಿಗೆ ನಮ್ಮ ಶಾಲೆಯಲ್ಲಿ ಅನೇಕ ಗೆಳತಿಯರಿದ್ದರು (ಕೃಪೆ ಉಪಧ್ಯಾಯರ ಮಾಸಿಕ ಸಭೆಗಳು). ಎಸ್.ಎಫ್.ಎಸ್ ಕ್ರೈಸ್ತ ಕಾನ್ವೆಂಟ್ ಶಾಲೆ. ಅಲ್ಲಿಯ ಅನೇಕ ಉಪಧ್ಯಾಯನಿಯರು ಅಮ್ಮನಿಗೆ ಹೋಲಿಸಿದರೆ ಇನ್ನೂ ‌ತುಂಬಾ ಚಿಕ್ಕವರು ಹಾಗು ಶಾಲೆಯ ಒಳಗಡೆಯ ಇದ್ದ ಟೀಚರ್ಸ್ ಹಾಸ್ಟೆಲ್‌ನಲ್ಲೆ ಅವರ ವಾಸ. ಅಮ್ಮ ಅವರ ಕೈಗೆ ನಮ್ಮನ್ನು ಓಪ್ಪಿಸಿದ್ದರು. ಸುಮಾರು ನಾಲ್ಕುವರೆವರೆಗು ಮನೆಪಾಠ ಮುಂತಾದವು. ನಂತರ ಮಮತ, ನಾನು ಅಲ್ಲೆ ಹಾಸ್ಟೆಲ್‌ ಮುಂದೆ ಆಟ ಆಡಿಕೊಳ್ಳುತ್ತಿದ್ದೆವು. ನಮ್ಮ ಮಿಸ್ಸುಗಳು ಅಗಾಗ ಹೊರಗೆ ಬಂದು ನಮ್ಮನ್ನು ಗಮನಿಸುತ್ತಿದ್ದರು. ಮಿಸ್ಸುಗಳ ಮನೆಯಿಂದ ‌ಬಂದ ತಿಂಡಿಗಳ ಹಾಗೂ ಹಾಸ್ಟೆಲ್‌ ತೋಟದ ಹಣ್ಣಿನ ರುಚಿ ಕೂಡ ಆಗಾಗ ದೊರೆಯತ್ತಿತ್ತು.

ಶಾಲೆಯಲ್ಲಿ ಬಡ ಮಕ್ಕಳಿಗೆ ಹಾಸ್ಟೆಲ್‌ ಇತ್ತು. ಅಲ್ಲಿಯ ಮಕ್ಕಳು ತೋಟದಲ್ಲಿ ಹಾಗು ಗೋಶಾಲೆಯಲ್ಲಿ, ಸರದಿ ಪ್ರಕಾರ ಸಾಯಂಕಾಲದ ಹೊತ್ತು ಕೆಲಸಮಾಡುತ್ತಿದ್ದರು. ಅದನ್ನು ನೋಡಿಕೊಳ್ಳುತ್ತಿದ್ದ ಪಾದ್ರಿ, ಅಪ್ಪನಿಗೆ ಪರಿಚಯ. ಅದರ ಪರಿಣಾಮವಾಗಿ ನಮಗೂ ಕೂಡ ಅಲ್ಲಿಗೆ ಹೋಗುವ ಅವಕಾಶ ದೊರೆಯಿತು. ಅದರಲ್ಲಿ ನನ್ನ ಸಹಪಾಠಿಗಳು ಕೂಡ ಇದ್ದರು. ಅವರ ಜೊತೆ ದನ ಮೇಯಿಸಿಕೊಂಡು ಅಥವಾ ಕಳೆ ಕೀಳುತ್ತಾ ಹಲವಾರು ಸಂಜೆಗಳನ್ನು ಕಳೆದದ್ದುಂಟು. ಆ ಅನುಭವ ಅನನ್ಯ.

ಅಮ್ಮ ಸುಮಾರು ೬:೩೦ ಹೊತ್ತಿಗೆ ಶಾಲೆಗೆ ಬರುತ್ತಿದ್ದಳು. ಕೆಲವೊಮ್ಮೆ ಅಪ್ಪ ಬರುತ್ತಿದ್ದರು. ನಮಗೆ ಅಮ್ಮ ಬಂದರೆ ಆನಂದ. ಅಮ್ಮ ಬರುವಾಗ‌ ನಮಗೋಸ್ಕರ ಸುಟ್ಟ ಜೋಳ, ಉದ್ದುದ್ದ ಕತ್ತರಿಸಿ ಕಾರ ಹಾಕಿದ ಗಿಣಿಮೂತಿ ಮಾವಿನಕಾಯಿ ಮುಂತಾದ ತಿಂಡಿತಿನಿಸು ತರುತಿದ್ದಳು. ನಮಗೆ ಅದನ್ನು ಸವಿಯತ್ತಾ, ಮಾತನಾಡುತ್ತಾ ಮನೆ ತಲುಪುವುದರಲ್ಲೇ ಸ್ವರ್ಗ.

ಇಲ್ಲಿ ನಾನು ಹಾಗು ನನ್ನ ಕುಟುಂಬದವರು ಅನೇಕರಿಗೆ ಋಣಿಯಾಗಿದ್ದೇವೆ. ಫಾದರ್ ಥೈಲ್ ನಮಗೆ ಸಕಾಲದಲ್ಲಿ ಸೀಟು ಕೊಟ್ಟು, ತುಂಬಾ‌ ಪ್ರೀತಿಯಿಂದ ‌ನೋಡಿಕೊಂಡರು. ಎಸ್.ಎಫ್.ಎಸ್ ಕನ್ನಡ ಮಾದ್ಯಮ ಶಾಲೆಯ ಎಲ್ಲಾ ಉಪಧ್ಯಾಯನಿಯರು (ನಾವವರನ್ನು ಮಿಸ್ ಅಂತಲೆ ಕರೆಯುತ್ತಿದ್ದದ್ದು). ನಮ್ಮ ಎಲ್ಲಾ ಮಿಸ್ಸುಗಳು ನಮ್ಮನ್ನು ಶಾಲಾ ಸಮಯದಲ್ಲೂ, ನಂತರವೂ ನಮ್ಮನ್ನು ಪ್ರೀತಿಯಿಂದ ನೋಡಿಕೊಂಡ ರೀತಿ ಮರೆಯಲು ಅಸಾಧ್ಯ.

ಬಹಳ ಒಳ್ಳೆಯವರು ನಮ್ಮಿಸ್ಸು
ಏನ್ ಹೇಳಿದ್ರೂ ಎಸೆಸ್ಸು
ನಗ್ತ ನಗ್ತ ಮಾತ್ನಾಡ್ತಾರೆ ಸ್ಕೂಲಿಗೆಲ್ಲ ಫೇಮಸ್ಸು
ಸ್ಕೂಲಿಗೆಲ್ಲ ಫೇಮಸ್ಸು

ನಿಜವಾಗಲು ತುಂಬಾ ಓಳ್ಳೆಯವರನ್ನು ನಾವು ಸಂಧಿಸಿದ ದಿನಗಳವು.

You may also like...

Leave a Reply

Your email address will not be published. Required fields are marked *