ನಾಗರತ್ನಮ್ಮನ ಬಾಲಗಳು

ನನಗೆ ತುಂಬಾ ನೆನಪಿಗೆ ಬರುವ ಬಾಲ್ಯದ, ಅಮ್ಮನ ಸಂಗತಿಗಳು ಅಂದರೆ ಶಾಲೆ. ನನ್ನ ಶಾಲೆಯಲ್ಲ ನನ್ನಮ್ಮನ ಶಾಲೆ. ನಾವಾಗ ಇದ್ದದ್ದು ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಹಳ್ಳಿಯಲ್ಲಿ. ಅಲ್ಲಿನ ಸರಕಾರಿ ಶಾಲೆಯಲ್ಲಿ ಅಮ್ಮ ಶಿಕ್ಷಕಿ. ಅದೇ ಊರಿನ ಸರಕಾರಿ ಪಶುವೈದ್ಯ ಶಾಲೆಯಲ್ಲಿ ಅಪ್ಪ ಕಾಂಪೌಂಡರ್. ಆ ಊರಿನಲ್ಲಿ ಯಾವ ಬೇಬಿ ಸಿಟ್ಟಿಂಗ್ ಇರಲಿಲ್ಲ. ನಮಗ್ಯಾವ ನೆಂಟರು ಇರಲಿಲ್ಲ. ಸಹಾಯಕಿಯನ್ನು ಇಟ್ಟುಕೊಳ್ಳುವಷ್ಟು ಸ್ಥಿತಿವಂತರೇನಾಗಿರಲಿಲ್ಲ. ಅದರೆ ಅಂಗನವಾಡಿ ಇತ್ತು. ಅದನ್ನ ನೋಡಿಕೋಳ್ತಾ ಇದ್ದವರು ರತ್ನಮ್ಮನವರು. ನಂತರ ಅವರು ಅಮ್ಮನ ಬಹುದೊಡ್ಡ ಗೆಳತಿ. ಆಕೆಯನ್ನು ನಾವು ಚಿಕ್ಕಿ (ಚಿಕ್ಕಮ್ಮ) ಅಂತಲೆ ಕರೆಯುತ್ತಿದ್ದದ್ದು. ಆಕೆ ಬಗ್ಗೆ ಇನ್ನೊಮ್ಮೆ ಹೇಳುವೆ.

ಅಂಗನವಾಡಿ ಮಧ್ಯಾಹ್ನ ಮುಗಿದ ಮೇಲೆ ಸರಕಾರಿ ಶಾಲೆ. ಅಮ್ಮ ಯಾವ ತರಗತಿಯಲಿ ಇರ್ತಾಳೋ, ಅದೇ ನಮ್ಮ ತರಗತಿ. ಬೇರೆ ಮಕ್ಕಳಿಗೆ ಏನು ಪಾಠನೋ ಅದೆ ನಮಗೂ ಪಾಠ. ಹೀಗೆ ಶುರುವಾಯಿತು ನಮ್ಮ ಶಿಕ್ಷಣ. ಹೀಗಾಗಿ ನನಗೂ ಮಮತಳಿಗೂ ಹುಟ್ಟಿದಾಗಿನಿಂದ ಶಾಲೆಗೆ ಹೋದ ಅನುಭವ ಇದೆ. ಅದುದರಿಂದ ನಮಗೆ ೧ ರಿಂದ ೩ನೇ ತರಗತಿಯವರೆಗೂ ಯಾವ ಪಾಠ ಯಾವ ತರಗತಿಯದು ಅಂತ ಅಷ್ಟು ಸ್ಪಷ್ಟತೆ ಇಲ್ಲ! ನಮ್ಮ ಬಾಲ್ಯ ಅಂದರೆ ಅಮ್ಮನ ಶಾಲೆ. ನಮ್ಮ ಎಲ್ಲಾ ಚಟುವಟಿಕೆಗಳು ಅಮ್ಮನ ಅಥವಾ ಅವಳ ಶಾಲೆಯ ವೇಳಾಪಟ್ಟಿಯ ಪ್ರಾಕಾರವೆ. ಶನಿವಾರ ಮುಂಜಾನೆ ಶಾಲೆ, ಅದಾದ ಮೇಲೆ ಚಂದಾಪುರದ ಸಂತೆ. ಭಾನುವಾರ ಎಣ್ಣೆ ಸ್ನಾನ ನಂತರ ಅಪ್ಪನ ಜೊತೆ ಸೈಕಲ್ ಸುತ್ತಾಟ. ಆಗ ಅಮ್ಮನಿಗೆ ಮನೆ ಕೆಲಸದ ಸಮಯ, ಸಾಯಂಕಾಲ ಡಿಡಿ ಸಿನಿಮಾ ಅಥವಾ ಸುಧಾ, ಮಯೂರ ಓದುವ ಸಮಯ. ಸೋಮವಾರ ಬಂದರೆ ಮತ್ತೆ ಚಕ್ರ ಶುರು.

ಪ್ರತಿ ತಿಂಗಳ ೭ಕ್ಕೆ ಟೀಚರ್ಸ್ ಮೀಟಿಂಗ್ ಚಂದಾಪುರದ ಶಾಲೆಯಲ್ಲಿ. ಅವತ್ತು ಬೆಳಗ್ಗೆ ಎದ್ದು ತಿಂಡಿ ಮಾಡಿ, ನಮಗೆ ತಿನ್ನಿಸಿ, ಟಿಫಿನ್ ಕಟ್ಟಿಕೊಂಡು, ನಮ್ಮನ್ನೂ ಎಳೆದುಕೊಂಡು, ಇದ್ದ ಒಂದೇ ಬಿ.ಟಿ.ಎಸ್ ಬಸ್ಸು ಹಿಡಿದುಕೊಂಡು ಚಂದಾಪುರದ ಶಾಲೆಗೆ ಬರುವಷ್ಟರಲ್ಲಿ ೯:೪೫. ೧೦ಗಂಟೆಗೆ ಪ್ರಾರಂಭವಾಗುವ ಸಭೆಗೆ ೧೫ ನಿಮಿಷ ಮುಂಚೆ ತಲುಪಿದ್ದೆವು. ಸುಮಾರು ೨೫೦ ಉಪಾಧ್ಯಾಯರ ನಡುವೆ ನಾವಿಬ್ಬರು ಮಕ್ಕಳು. ಸ್ತುತ್ಯರ್ಹ ಸಂಗತಿಯೆಂದರೆ ಯಾವತ್ತೂ ಅಮ್ಮನ ಸಹೋದ್ಯೋಗಿಗಳು ಇದು ದೊಡ್ಡವರ ಸಭೆ ಮಕ್ಕಳನ್ನು ಕರೆತರಬೇಡಿ ಅನ್ನಲಿಲ್ಲ. ಸಹೋದ್ಯೋಗಿಗಳಿಂದ ಹಿಡಿದು ಡಿಡಿಪಿಐವರೆಗೂ, ಎಲ್ಲರೂ ನಮ್ಮನ್ನು ಪ್ರೀತಿಯಿಂದ ನಾಗರತ್ನಮ್ಮನ ಬಾಲಗಳು ಅಂತನೆ ಕರೆಯುತ್ತಿದ್ದದ್ದು. ಎಷ್ಟೊ ಬಾರಿ ನಮಗೆ ಅಂತಾನೆ ಸಂಘಟಕರು ತಿಂಡಿ ತಿನಿಸು ತರಿಸಿಕೊಟ್ಟಿದ್ದು ಇದೆ. ಇದೆಲಕ್ಕೂ ಬಲವಾದ ಕಾರಣ ಅಂದರೆ ಅಮ್ಮನ ವೃತ್ತಿಪರತೆ ಹಾಗು ಕೆಲಸದ ಬಗ್ಗೆ ಇದ್ದ ನಿಷ್ಟೆ. ಸಹೋದ್ಯೋಗಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಒಂದು ಚಕಾರ ಎತ್ತಿದ್ದು ನಾವು ಅವಳ ‎ವೃತ್ತಿ ಜೀವನದಲ್ಲಿ ಕೇಳಿಲ್ಲ. ಕೇಳಿದ್ದು ಓಂದೇ ದೂರು ಯಾಕಿಯಮ್ಮ ಇಷ್ಟೊಂದು ಓದ್ದಾಡುತ್ತಾಳೆ ಸ್ವಲ್ಪ ಅಡ್ಜಸ್ಟ್‌ಮಾಡ್ಕೊಂಡು ಹೋಗಕ್ಕಾಗಲ್ವ ಅಂಥ. ಆ ಬುದ್ದಿ ಕೊನೆಗೂ ಆಕೆಗೆ ಬರಲಿಲ್ಲ.

ನಂತರ ನಾವು ಆ ಊರು ಬಿಡಬೇಕಾಯ್ತು. ಅದಕ್ಕೆ ೬ ವರ್ಷದ ಬಾಲಕ ಓರ್ವ ಉಪಾಧ್ಯಾಯರು ಅಷ್ಟು ಚೆನ್ನಾಗಿ ಪಾಠ ಮಾಡುತ್ತಿಲ್ಲ ಅಂದಿದ್ದೆ ಕಾರಣವಾಯ್ತು. ಅಮ್ಮನಾದರು ನನ್ನನ್ನು ಕಡೆಗಣಿಸಿ ನನ್ನ ಪರವಾಗಿ ಕ್ಷಮೆ ಕೇಳ ಬಹುದಿತ್ತು. ಆದರೆ ಅವಳಿಗೆ ಸತ್ಯ ತಿಳಿದಿತ್ತು. ಅದಕ್ಕೆ ನಾವು ಆ ಊರನ್ನೇ ಬಿಟ್ವಿ. ನಂತರದ ಕಥೆ ಇನ್ನೊಮ್ಮೆ.

ಈ ೧೪ಕ್ಕೆ ಅಮ್ಮ ಹೋಗಿ ವರ್ಷ ಆಯ್ತು. ಅಮ್ಮನ ಬಗ್ಗೆ ಮಮತಳ ಬಳಿ ಮಾತಾಡುವಾಗ ನಾಗರತ್ನಮ್ಮನ ಬಾಲಗಳು ನೆನಪಿಗೆ ಬಂದವು.